ಮುಂಬೈ, ಮಾ. 29 (DaijiworldNews/TA): ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ, ‘ಲೇಡಿ ಸೂಪರ್ ಸ್ಟಾರ್’ ಎಂದೇ ಪ್ರಸಿದ್ಧಿ ಪಡೆದಿರುವ ಅವರು, ಮತ್ತೊಮ್ಮೆ ಬಾಲಿವುಡ್ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಎರಡು ದಶಕಕ್ಕೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿರುವ ನಯನತಾರಾ, ಕನ್ನಡ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿಯೂ ಯಶಸ್ವಿಯಾಗಿ ನಟಿಸಿದ್ದಾರೆ.

2023ರಲ್ಲಿ ಶಾರುಖ್ ಖಾನ್ ನಟನೆಯ ಜವಾನ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದ್ದ ಅವರು, ಇದೀಗ ಮತ್ತೊಬ್ಬ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಅಭಿನಯದ ಹೊಸ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ದಕ್ಷಿಣ ಭಾರತದವರೇ ಆಗಿದ್ದಾರೆ.
ಖ್ಯಾತ ನಿರ್ಮಾಪಕ ದಿಲ್ ರಾಜು ಈ ಸಿನಿಮಾವನ್ನು ನಿರ್ಮಿಸಲಿದ್ದು, ತೆಲುಗಿನ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ದಕ್ಷಿಣದ ಸ್ಟಾರ್ ನಟಿಯನ್ನು ಬಾಲಿವುಡ್ ಸ್ಟಾರ್ ಎದುರು ನಾಯಕಿಯಾಗಿ ಆಯ್ಕೆ ಮಾಡಿರುವುದು ವಿಶೇಷ ಗಮನಸೆಳೆಯುತ್ತಿದೆ. ಪ್ರಸ್ತುತ ಸಲ್ಮಾನ್ ಖಾನ್ ‘ಬ್ಯಾಟಲ್ ಆಫ್ ಗಾಲ್ವಾನ್’ (ಈಗ ‘ಮಾತೃಭೂಮಿ’ ಎಂದು ಹೆಸರಿಸಲಾಗಿದೆ) ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೊನೆಯ ಹಂತದಲ್ಲಿದೆ.
ವಂಶಿ ಪೈಡಪಲ್ಲಿ ತಮ್ಮ ವಿಭಿನ್ನ ಶೈಲಿಯ ನಿರ್ದೇಶನಕ್ಕಾಗಿ ಪ್ರಸಿದ್ಧರು. ಪ್ರಭಾಸ್ ನಟನೆಯ ‘ಮುನ್ನಾ’, ಜೂನಿಯರ್ ಎನ್ಟಿಆರ್ ಅಭಿನಯದ ‘ಬೃಂದಾವನಂ’, ರಾಮ್ ಚರಣ್ ನಟನೆಯ ‘ಯೆವಡು’, ‘ಊಪಿರಿ’, ರಾಷ್ಟ್ರ ಪ್ರಶಸ್ತಿ ಪಡೆದ ‘ಮಹರ್ಷಿ’ ಹಾಗೂ ವಿಜಯ್ ಅಭಿನಯದ ‘ವಾರಿಸು’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ಸು ಗಳಿಸಿದ್ದಾರೆ. ಈಗ ಸಲ್ಮಾನ್ ಖಾನ್ - ನಯನತಾರಾ ಕಾಂಬಿನೇಷನ್ನಲ್ಲಿ ಬರುತ್ತಿರುವ ಈ ಹೊಸ ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿದೆ.