ಬೆಂಗಳೂರು, ಫೆ. 16 (DaijiworldNews/TA): ಕನ್ನಡ ಚಿತ್ರರಂಗದ ನಟ ದರ್ಶನ್ ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ಆದರೆ ಅವರು ಜೈಲಿನಲ್ಲಿ ಇರುವುದರಿಂದ ಈ ಬಾರಿ ಸಂಭ್ರಮಕ್ಕೆ ಅವಕಾಶ ಸಿಗಲಿಲ್ಲ. ನೆಚ್ಚಿನ ನಟ ಜೊತೆ ಇಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿ ಎದ್ದು ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಹಲವು ಸೆಲೆಬ್ರಿಟಿಗಳು ದರ್ಶನ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಕೆಲ ಅಭಿಮಾನಿಗಳು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಆರಂಭದಲ್ಲಿ ಕೆಲ ತಿಂಗಳು ಜೈಲಿನಲ್ಲಿ ಕಳೆದ ಅವರು ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಆದರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮತ್ತೆ ಬಂಧನಕ್ಕೆ ಒಳಗಾದರು. ಜೈಲಿನಲ್ಲಿರುವ ಅವರ ಪರಿಸ್ಥಿತಿ ಅಭಿಮಾನಿಗಳಿಗೆ ನೋವುಂಟು ಮಾಡುತ್ತಿದೆ. ಇದೀಗ ಅವರು ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಜನ್ಮದಿನ ಆಚರಿಸಿಕೊಳ್ಳುವ ಸ್ಥಿತಿ ಎದುರಾಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ವಿಜಯಲಕ್ಷ್ಮೀ ಅವರು ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. “ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು” ಎಂದು ಅವರು ಬರೆದುಕೊಂಡಿದ್ದಾರೆ. ಹಂಚಿಕೊಂಡಿರುವ ಚಿತ್ರದಲ್ಲಿ ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಕೇಕ್ ಎದುರು ನಿಂತಿರುವುದು ಕಾಣಿಸುತ್ತದೆ. ದರ್ಶನ್ ಅವರಿಗೆ ಆನೆ ವಿಶೇಷವಾಗಿ ಇಷ್ಟವಾಗಿರುವುದರಿಂದ, ಕೇಕ್ ಮೇಲೂ ಆನೆಯ ಆಕೃತಿ ಅಲಂಕರಿಸಲಾಗಿದೆ. ಜೈಲಿನ ನಿರ್ಬಂಧಗಳ ನಡುವೆಯೂ ಅಭಿಮಾನಿಗಳ ಪ್ರೀತಿ ಮತ್ತು ಕುಟುಂಬದ ಬೆಂಬಲ ದರ್ಶನ್ ಅವರಿಗೆ ಧೈರ್ಯ ತುಂಬುತ್ತಿದೆ.