ಮುಂಬೈ, ಫೆ. 08 (DaijiworldNews/AA): ಬಾಲಿವುಡ್ನ ಖ್ಯಾತ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರು ಒಂದೂವರೆ ದಶಕದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೇ ಇದೀಗ ತಿಹಾರ್ ಜೈಲು ಸೇರಿದ್ದಾರೆ.

ಸಿನಿಮಾ ಮಾಡುವ ಉದ್ದೇಶದಿಂದ ದೆಹಲಿ ಮೂಲದ ಉದ್ಯಮಿಯೊಬ್ಬರಿಂದ ರಾಜ್ಪಾಲ್ ಯಾದವ್ ಅವರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಇದೀಗ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಮ್ಮದೇ ನಿರ್ದೇಶನದ 'ಅತಾ ಪತಾ ಲಾಪತಾ' ಸಿನಿಮಾ ಮಾಡಲು ರಾಜ್ಪಾಲ್ ಯಾದವ್ ಸಾಲ ಮಾಡಿದ್ದರು. ಆದರೆ ಈ ಸಿನಿಮಾ ಸೋತಿತು. ಆದ್ದರಿಂದ ಅವರಿಗೆ ಸಾಲ ತೀರಿಸಲು ಸಾಧ್ಯವಾಗಲಿಲ್ಲ.
ಸಾಲ ಕೊಟ್ಟವರು ರಾಜ್ಪಾಲ್ ಯಾದವ್ ಮೇಲೆ ಕೇಸ್ ಹಾಕಿದರು. ರಾಜ್ಪಾಲ್ ಯಾದವ್ ನೀಡಿದ್ದ ಹಲವು ಚೆಕ್ಗಳು ಬೌನ್ಸ್ ಆಗಿದ್ದರಿಂದ ಅವರಿಗೆ 2018ರಲ್ಲೇ ಶಿಕ್ಷೆ ಪ್ರಕಟ ಆಯಿತು. 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲಾಯಿತು. ಆ ಬಳಿಕವೂ ರಾಜ್ಪಾಲ್ ಯಾದವ್ ಸಾಲ ತೀರಿಸಲು ವಿಫಲರಾದರು.
ಇದೀಗ ಒಂದೂವರೆ ದಶಕಗಳ ಬಳಿಕ ಈ ಕೇಸ್ ಅಂತಿಮ ಹಂತಕ್ಕೆ ಬಂದಿದೆ. ರಾಜ್ಪಾಲ್ ಯಾದವ್ ಅವರಿಗೆ ಕೂಡಲೇ ಶರಣಾಗುವಂತೆ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಸಮಯಾವಕಾಶ ನೀಡುವಂತೆ ಅವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.