ಬೆಂಗಳೂರು, ಫೆ. 05 (DaijiworldNews/TA): ನಟಿ ರಮ್ಯಾ ನಟನೆಯಿಂದ ದೂರ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಆಗಾಗ ಹೊಸ ಹೊಸ ಫೋಟೋಗಳು ಹಾಗೂ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ಹೊಸ ಫೋಟೋಗಳು ಮತ್ತೆ ಸುದ್ದಿಯಾಗಿವೆ.

ಒಂದು ಕಾಲದಲ್ಲಿ ನಟನೆಯಲ್ಲಿ ಮಿಂಚಿದ್ದ ರಮ್ಯಾ ಬಳಿಕ ಚಿತ್ರರಂಗದಿಂದ ದೂರ ಉಳಿದರು. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಲು ಪ್ರಯತ್ನ ನಡೆಸಿದರೂ, ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ರಮ್ಯಾ ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಇತ್ತೀಚೆಗೆ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸಂಜಯ್ ಎಂಬುವವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ರಮ್ಯಾ ಅವರಿಗೆ ಸಂಜಯ್ ತಮ್ಮನಂತೆಯೇ ಇದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಸಂಜ್ (ನನ್ನ ತಮ್ಮ). ನಾವು ಎಂದಿಗೂ ದೊಡ್ಡವರಾಗದಿರಲಿ. ಇನ್ನೂ ಅನೇಕ ಕಡೆಗಳಲ್ಲಿ ಸುತ್ತಾಟ ಮಾಡಬೇಕಿದೆ ಮತ್ತು ಹೊಟ್ಟೆ ಹುಣ್ಣಾಗುವಂತೆ ನಗಬೇಕಿದೆ” ಎಂದು ರಮ್ಯಾ ತಮ್ಮ ಪೋಸ್ಟ್ಗೆ ಕ್ಯಾಪ್ಶನ್ ನೀಡಿದ್ದಾರೆ.
ಈ ಪೋಸ್ಟ್ಗೆ ಸಂಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, “ಧನ್ಯವಾದಗಳು ಅಕ್ಕ” ಎಂದು ಕಾಮೆಂಟ್ ಮಾಡಿದ್ದಾರೆ. ರಮ್ಯಾ ಮತ್ತು ಸಂಜಯ್ ಹಲವು ಬಾರಿ ಒಟ್ಟಾಗಿ ಪ್ರವಾಸ ಹೋಗಿದ್ದು, ರಮ್ಯಾ ಹಂಚಿಕೊಳ್ಳುವ ಫೋಟೋಗಳಲ್ಲಿ ಸಂಜಯ್ ಆಗಾಗ ಕಾಣಿಸಿಕೊಳ್ಳುತ್ತಾರೆ. ಗಮನಾರ್ಹವಾಗಿ, ರಮ್ಯಾ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಪ್ರವೇಶಿಸಬೇಕಿತ್ತು. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ನಂತರ ‘ಉತ್ತರಕಾಂಡ’ ಸಿನಿಮಾವನ್ನೂ ಒಪ್ಪಿಕೊಂಡು, ಅದರಿಂದಲೂ ಹೊರ ನಡೆದಿದ್ದರು.