ಮುಂಬೈ, ಫೆ. 04 (DaijiworldNews/AA): ಮಹಾಕುಂಭಮೇಳದ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಮೊನಾಲಿನಾ ಭೋಸ್ಲೆ ಅವರು ತಮ್ಮ ಮೊದಲ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.

ಕಳೆದ ವರ್ಷ ಮಹಾಕುಂಭಮೇಳದಲ್ಲಿ ಮೊನಾಲಿಸಾ ಭೋಸ್ಲೆ ಅವರು ಮಣಿ ಸರಗಳನ್ನು ಮಾರುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರು ರಾತ್ರೋರಾತ್ರಿ ಜನಪ್ರಿಯತೆ ಪಡೆದುಕೊಂಡರು. ಅದಾದ ಬಳಿಕ ಕೆಲವೇ ದಿನಗಳಲ್ಲಿ ಅವರಿಗೆ ಹಿಂದಿ ಚಿತ್ರರಂಗದಿಂದ ಅವಕಾಶಗಳು ಬಂದಿತ್ತು. ಅವರಿಗೆ ನಾಯಕ ನಟಿಯಾಗುವ ಅವಕಾಶ ಸಿಕ್ಕಿತು. ಇದೀಗ ಅವರು ಶೂಟಿಂಗ್ ಮುಗಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಮೊನಾಲಿಸಾ ನಟಿಸುತ್ತಿರುವ ಮೊದಲ ಸಿನಿಮಾ 'ದಿ ಡೈರಿ ಆಫ್ ಮಣಿಪುರ್' ಗೆ ಸನೋಜ್ ಮಿಶ್ರಾ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ಬಾಲಿವುಡ್ ಖ್ಯಾತ ನಟ ರಾಜ್ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
'ದಿ ಡೈರಿ ಆಫ್ ಮಣಿಪುರ್' ಸಿನಿಮಾಗೆ ನಾಲ್ಕು ಹಂತಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಉತ್ತರ ಪ್ರದೇಶ, ಮಣಿಪುರ, ನೇಪಾಳ ಮತ್ತು ಡೆಹರಾಡೂನ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ.