ಮುಂಬೈ, ಜ. 05 (DaijiworldNews/TA): ಸ್ಪ್ಲಿಟ್ಸ್ವಿಲ್ಲಾ 13 ರ ವಿಜೇತ ಹಾಗೂ ಬಿಗ್ ಬಾಸ್ ಮರಾಠಿ 3 ರ ರನ್ನರ್ ಅಪ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಜೇ ದುಧಾನೆ ಅವರನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ಧಾರೆ. ಜೇ ವಿರುದ್ಧ ರೂ. 5 ಕೋಟಿ ವಂಚನೆ ಆರೋಪದ ಪ್ರಕರಣ ದಾಖಲಾಗಿದ್ದು, ಅವರಿಗೆ ಮತ್ತು ಅವರ ಕುಟುಂಬದ ಕೆಲವು ಸದಸ್ಯರ ಮೇಲೆ ತನಿಖೆ ಮುಂದುವರೆದಿದೆ.

ಅಪರಾಧದ ವಿವರಗಳು ತಿಳಿದುಬಂದಂತೆ, ನಿವೃತ್ತ ಎಂಜಿನಿಯರ್ ಜೈ ದುಧಾನೆ, ಜೇ ಮತ್ತು ಅವರ ಕುಟುಂಬದ ನಾಲ್ಕು ಸದಸ್ಯರಿಗೆ ಐದು ವಾಣಿಜ್ಯ ಅಂಗಡಿಗಳಲ್ಲಿ ಹೂಡಿಕೆ ಮಾಡಲು ಮನವಿ ಮಾಡಿದ್ದಾರೆ. ರೂ. 4.61 ಕೋಟಿ ನಗದು ಹೂಡಿದ ಬಳಿಕ, ಬ್ಯಾಂಕಿನಿಂದ ಬಂದ ನೋಟಿಸ್ನಲ್ಲಿ ಆ ಅಂಗಡಿಗಳು ಈಗಾಗಲೇ ಅಡಮಾನಕ್ಕೆ ಹೋಗಿರುವುದು ತಿಳಿದಿದೆ. ನಂತರ, ಜೇ ದುಧಾನೆ ಅಂಗಡಿಗಳನ್ನು ಮಾರಾಟ ಮಾಡಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆಂಬ ಆರೋಪ ಹೊರಬಂದಿದೆ.
ಜನವರಿ 4 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದ ವೇಳೆ, ಜೇ ದುಧಾನೆ ತಮ್ಮ ಹನಿಮೂನ್ ಪ್ರಯಾಣಕ್ಕಾಗಿ ಪತ್ನಿಯೊಂದಿಗೆ ವಿಮಾನ ನಿಲ್ದಾಣದಲ್ಲಿದ್ದರು ಎನ್ನಲಾಗಿದೆ. ಬಂಧನದ ನಂತರ ಮಾಧ್ಯಮಗಳಿಗೆ ಅವರು “ನನ್ನ ಮೇಲಿನ ಆರೋಪಗಳು ಸುಳ್ಳು, ನಾನು ನಿರಪರಾಧಿ. ನಾನು ತನಿಖೆಗಾಗಿ ಸಂಪೂರ್ಣ ಸಹಕರಿಸುತ್ತೇನೆ” ಎಂದು ಹೇಳಿದ್ದಾರೆ.
ಜೇ ದುಧಾನೆ ಡಿಸೆಂಬರ್ 26 ರಂದು ಹರ್ಷಲಾ ಪಾಟೀಲ್ ಅವರನ್ನು ಮದುವೆಯಾಗಿ, ಸಾಮಾಜಿಕ ಮಾಧ್ಯಮದಲ್ಲಿ ವಿವಾಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಎಂಟಿವಿ ಸ್ಪ್ಲಿಟ್ಸ್ವಿಲ್ಲಾ 13ರ ವಿಜೇತ ಹಾಗೂ ಬಿಗ್ ಬಾಸ್ ಮರಾಠಿ 3ರ ಮೊದಲ ರನ್ನರ್ ಅಪ್ ಆಗಿದ್ದಾರೆ. ಮುಂಬೈ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಮುಂದುವರೆಸುತ್ತಿದ್ದಾರೆ. ಜೇ ಮತ್ತು ಅವರ ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಲಾಗುತ್ತಿದೆ.