ನವದೆಹಲಿ, ಜ. 04 (DaijiworldNews/TA): ಬೈಕ್ ಅಪಘಾತದಲ್ಲಿ ಖ್ಯಾತ ನಟ ಆಶಿಷ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಬರುವಾ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಗುಹವಾಟಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ನಟ ಆಶಿಷ್ ವಿದ್ಯಾರ್ಥಿ ಸ್ವತಃ ಸ್ಪಷ್ಟಪಡಿಸಿದ್ದಾರೆ.

ಭೋಜನದ ಬಳಿಕ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಆತನನ್ನು ಗುಹವಾಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ಆಶಿಷ್ ವಿದ್ಯಾರ್ಥಿ, ತಾವು ಮತ್ತು ಪತ್ನಿ ಇಬ್ಬರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. “ನಮಗೆ ಸಣ್ಣ ಗಾಯಗಳಷ್ಟೇ ಆಗಿವೆ. ರೂಪಾಲಿಯನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ. ಎಲ್ಲವೂ ನಿಯಂತ್ರಣದಲ್ಲಿ ಇದೆ” ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಿಂದಲೇ ಇನ್ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ ನಟ, ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಅಪಘಾತದ ಸಂದರ್ಭದಲ್ಲಿ ನೆರವಾದ ಸ್ಥಳೀಯ ನಿವಾಸಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ತುರ್ತು ಸೇವಾ ಸಿಬ್ಬಂದಿಗೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದಲ್ಲದೆ, ಗಾಯಗೊಂಡ ಬೈಕ್ ಸವಾರನಿಗೆ ಪ್ರಜ್ಞೆ ಮರಳಿ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ಆಶಿಷ್ ವಿದ್ಯಾರ್ಥಿ ತಿಳಿಸಿದ್ದಾರೆ. ಈ ಸ್ಪಷ್ಟನೆ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.