ಬೆಳಗಾವಿ, ಡಿ. 28 (DaijiworldNews/AA): ಸಮಾಜದಲ್ಲಿ ಕೆಲವೊಂದಿಷ್ಟು ಕಾಮೆಂಟ್ ಕಲಿವೀರರು ಹುಟ್ಟಿಕೊಂಡಿದ್ದಾರೆ ಎಂದು ನಟ ವಸಿಷ್ಠ ಸಿಂಹ, ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್ ಮಾಡುವವರ ವಿರುದ್ಧ ಕಿಡಿ ಕಾರಿದ್ದಾರೆ.

ಬೆಳಗಾವಿ ಸರ್ದಾರ ಮೈದಾನದಲ್ಲಿ ಆಯೋಜನೆ ಉತ್ಸವದಲ್ಲಿ ಮಾತನಾಡಿದ ಅವರು, "ಫೇಸ್ಬುಕ್ ಅಭಿಮಾನಿಗಳ ಅತಿರೇಕದ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ, ಕೈಲಾದಷ್ಟು ಒಳ್ಳೆಯದನ್ನು ಹಂಚಿಕೊಳ್ಳಿ. ಕೆಟ್ಟ ವಿಷಯಗಳನ್ನ ಹಂಚೋದು ಬೇಡ. ಇವತ್ತಿನ ಸಮಾಜದಲ್ಲಿ ಕೆಲವೊಂದಿಷ್ಟು ಜನ ಕಾಮೆಂಟ್ ಕಲಿವೀರರು ಹುಟ್ಟಿಕೊಂಡಿದಾರೆ. ಅಂತವರು ನಿಮ್ಮ ಗಮನಕ್ಕೆ ಬಂದರೆ ತಡೆಯಿರಿ" ಎಂದು ಹೇಳಿದ್ದಾರೆ.
"ಬೇರೆಯವರ ಖಾತೆಗೆ ಹೋಗಿ ಅನಗತ್ಯವಾಗಿ ಮಾತಾಡೋದು ಬರೆಯೋದು, ಶೌರ್ಯ ಮೆರೆಯೋದು ಯಾರು ಮಾಡೋದು ಬೇಡಾ. ಇನ್ನೊಬ್ಬರನ್ನು ಕೆಣಕಿ, ಕಾಡಿ ಪೀಡಿಸಿ ಬದುಕೋದು ಸಂತೋಷ ಅಲ್ಲ ಅದೊಂದು ವಿಕೃತಿ" ಎಂದು ತಿಳಿಸಿದ್ದಾರೆ.
"ಬೆಳಗಾವಿ ಗಡಿ ಭಾಗ ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿರುವ ಸವಾಲುಗಳು ಹತ್ತು ಹಲವು, ಅದೆಲ್ಲದಕ್ಕೆ ಎದೆಗೊಟ್ಟು ಕನ್ನಡ ಬೆಳೆಸುವ ಕೆಲಸ ಮಾಡುತ್ತಿದದೀರಿ. ಅಭಿಮಾನ ಅಂದ್ರೇ ಇದು, ಭಾಷೆ ಅಂದ್ರೇ ಇದು ಕನ್ನಡ ಬಳಸಿದರೆ ಸಾಕು ಕನ್ನಡ ಅಜರಾಮವಾಗಿ ಉಳಿಯುತ್ತದೆ" ಎಂದಿದ್ದಾರೆ.