ಚೆನ್ನೈ, ಡಿ. 28 (DaijiworldNews/TA): ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಅಧಿಕೃತವಾಗಿ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 33 ವರ್ಷಗಳ ಕಾಲ ನಾಯಕನಾಗಿ ಸಿನಿಪಯಣ ನಡೆಸಿದ ವಿಜಯ್, ಅಭಿಮಾನಿಗಳ ಭಾರೀ ಬೆಂಬಲದ ನಡುವೆ ಈ ನಿರ್ಧಾರ ಪ್ರಕಟಿಸಿ ಭಾವುಕರಾದರು. 51 ವರ್ಷದ ನಟ ಇನ್ನು ಮುಂದೆ ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸಲಿದ್ದಾರೆ.

ಮಲೇಷ್ಯಾದಲ್ಲಿ ನಡೆದ ‘ಜನ ನಾಯಗನ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ಈ ಚಿತ್ರದ ನಂತರ ನಟನೆಯಿಂದ ದೂರ ಸರಿಯುವುದಾಗಿ ಘೋಷಿಸಿದರು. “ಜನರು ನನಗಾಗಿ ನಿಂತಿದ್ದಾರೆ. ಅವರಿಗಾಗಿ ಮುಂದಿನ 30 ವರ್ಷ ನಾನು ನಿಲ್ಲಲು ಸಿದ್ಧ” ಎಂದು ಹೇಳಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದರು. ನಟನಾ ವೃತ್ತಿಗೆ ವಿದಾಯ ಹೇಳುವ ವೇಳೆ ವಿಜಯ್ ಭಾವುಕರಾಗಿ, “ನಾನು ಮರಳಿನಲ್ಲಿ ಒಂದು ಸಣ್ಣ ಮನೆ ಕಟ್ಟಲು ಬಂದೆ. ಆದರೆ ನೀವು ನನಗೆ ಅರಮನೆ ಕಟ್ಟಿಕೊಟ್ಟಿದ್ದೀರಿ. ನನಗಾಗಿ ನಿಂತ ಅಭಿಮಾನಿಗಳಿಗಾಗಿ ನಾನು ನಿಲ್ಲುತ್ತೇನೆ” ಎಂದು ಹೇಳಿದರು. ‘ಜನ ನಾಯಗನ್’ ಆಡಿಯೋ ಲಾಂಚ್ನಲ್ಲಿ ವಿಜಯ್ ‘ಕಚೇರಿ’ ಹಾಡಿಗೆ ಡಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಈ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ, ಪ್ರಿಯಾಮಣಿ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವಿಜಯ್ 10ನೇ ವಯಸ್ಸಿನಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. 1992ರಲ್ಲಿ ನಾಯಕನಾಗಿ ಪರಿಚಯವಾದ ಅವರು, ಇದುವರೆಗೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2024ರಲ್ಲಿ ‘ತಮಿಳಗ ವೆಟ್ರಿ ಕಳಗಂ’ ಎಂಬ ರಾಜಕೀಯ ಪಕ್ಷವನ್ನು ಘೋಷಿಸಿದ ವಿಜಯ್, ಮುಂದಿನ ದಿನಗಳಲ್ಲಿ ರಾಜಕೀಯ ಜೀವನದತ್ತ ಸಂಪೂರ್ಣ ಗಮನ ಹರಿಸಲಿದ್ದಾರೆ. ‘ಜನ ನಾಯಗನ್’ ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಪ್ರಿಯಾಮಣಿ, ಬಾಬಿ ಡಿಯೋಲ್ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 9, 2026ರಂದು ಬಿಡುಗಡೆಯಾಗಲಿದೆ.