ಬೆಂಗಳೂರು, ನ. 01 (DaijiworldNews/TA): ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ರಾಕಿಂಗ್ ಸ್ಟಾರ್ ಯಶ್ ತಮ್ಮ ಮೂಲ ಭಾಷೆಯಾದ ಕನ್ನಡದ ಮೇಲಿನ ಪ್ರೀತಿ ಮತ್ತು ಗೌರವವನ್ನು ಮತ್ತೊಮ್ಮೆ ತೋರಿಸಿದ್ದಾರೆ. ಇಂದು (ನವೆಂಬರ್ 1) ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನ ಯಶ್ ಕನ್ನಡದಲ್ಲೇ ಹೃದಯಸ್ಪರ್ಶಿ ಟ್ವೀಟ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಯಶ್ ತಮ್ಮ ಟ್ವೀಟ್ನಲ್ಲಿ “ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಬರೆದು, ಕನ್ನಡಿಗನ ಹೆಮ್ಮೆ ಸೊಗಸಾಗಿ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಅಭಿಮಾನಿಗಳು ಯಶ್ ಅವರ ಕನ್ನಡ ಪ್ರೀತಿಯನ್ನು ಮೆಚ್ಚಿದ್ದಾರೆ. “ಯಶ್ ಕನ್ನಡದ ಗೌರವ” ಎಂದು ಅನೇಕರು ಕಾಮೆಂಟ್ ಮಾಡಿದ್ದು, ರಾಜ್ಯೋತ್ಸವದ ದಿನ ಅವರ ಈ ಟ್ವೀಟ್ ಭರ್ಜರಿ ಸದ್ದು ಮಾಡಿದೆ.
ಈ ವೇಳೆ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವೂ ಚರ್ಚೆಯಲ್ಲಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಮುಂದಿನ ವರ್ಷ ಮಾರ್ಚ್ 19 ರಂದು, ಯುಗಾದಿ ಪ್ರಯುಕ್ತ ತೆರೆಗೆ ಬರಲಿದೆ. ಫ್ಯಾನ್ಸ್ ಈಗಾಗಲೇ ಈ ಸಿನಿಮಾದಿಗಾಗಿ ಭಾರೀ ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚೆಗೆ ಚಿತ್ರದ ಶೂಟಿಂಗ್ ವೇಳೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳು ಹರಿದಾಡಿದರೂ, ನಿರ್ಮಾಣ ಸಂಸ್ಥೆ ಅದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ. ಚಿತ್ರ ಚಿತ್ರೀಕರಣ ಯೋಜನೆ ಪ್ರಕಾರವೇ ಸಾಗುತ್ತಿದೆ ಎಂದು ತಂಡ ತಿಳಿಸಿದೆ.
ರಾಜ್ಯೋತ್ಸವದ ದಿನ ಯಶ್ ನೀಡಿದ ಈ ಕನ್ನಡ ಪ್ರೀತಿ ತುಂಬಿದ ಸಂದೇಶ ಅಭಿಮಾನಿಗಳ ಹೃದಯ ಗೆದ್ದಿದೆ. “ರಾಕಿಂಗ್ ಸ್ಟಾರ್ ಮಾತ್ರವಲ್ಲ, ಕನ್ನಡಿಗರ ಹೆಮ್ಮೆ ಯಶ್!” ಎಂದು ನೆಟ್ಟಿಗರು ಪ್ರಶಂಸೆ ಸಲ್ಲಿಸುತ್ತಿದ್ದಾರೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.