ಮುಂಬೈ, ಅ. 18 (DaijiworldNews/AA): 'ದಂಗಲ್', 'ಸೀಕ್ರೆಟ್ ಸೂಪರ್ ಸ್ಟಾರ್' ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಝೈರಾ ವಾಸಿಮ್ ಅವರು, ಇದೀಗ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಅವರು ತಮ್ಮ ನಿಖಾ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

24ನೇ ವಯಸ್ಸಿಗೆ ಹೊಸ ಬಾಳಿಗೆ ಕಾಲಿಟ್ಟಿರುವ ಝೈರಾ ವಾಸಿಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಚಾರವನ್ನು ಹಂಚಿಕೊಂಡಿದ್ದಾರೆ. ಪತಿ ಜೊತೆ ನಿಂತು ಅವರು ಚಂದ್ರನ ನೋಡುತ್ತಿದ್ದಾರೆ. 'ಮೂರು ಬಾರಿ ಕುಬೂಲ್ ಹೇ' ಎಂದು ಅವರು ಬರೆದುಕೊಂಡಿದ್ದಾರೆ.
ಝೈರಾ ವಾಸಿಮ್ ಅವರು 15ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೇವಲ ನಾಲ್ಕು ವರ್ಷ ಮಾತ್ರ ಸಿನಿಮಾ ರಂಗದಲ್ಲಿ ಇದ್ದ ಅವರು ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದಾರೆ. ಅವರು 'ದಂಗಲ್' ಸಿನಿಮಾ ಮೂಲಕ ಗಮನ ಸೆಳೆದರು. 2017ರ 'ಸೀಕ್ರೆಟ್ ಸೂಪರ್ ಸ್ಟಾರ್' ಭಾರತದಲ್ಲಿ ಸಾಧಾರಣ ಎನಿಸಿಕೊಂಡರೂ, ಚೀನಾದಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತು. ಬಳಿಕ 2019ರಲ್ಲಿ 'ದಿ ಸ್ಕೈ ಈಸ್ ಪಿಂಕ್' ಸಿನಿಮಾ ಮಾಡಿದರು. ಈ ಚಿತ್ರದ ಬಳಿಕ ಅವರು ಸಿನಿಮಾರಂಗದಿಂದ ದೂರ ಇದ್ದರು.
'ಈ ಕ್ಷೇತ್ರವು ನಿಜಕ್ಕೂ ನನಗೆ ಬಹಳಷ್ಟು ಪ್ರೀತಿ, ಬೆಂಬಲ ಮತ್ತು ಮೆಚ್ಚುಗೆಯನ್ನು ತಂದಿದೆ. ಆದರೆ ಅದು ನನ್ನನ್ನು ಅಜ್ಞಾನದ ಹಾದಿಗೆ ಕರೆದೊಯ್ಯಿತು. ಅರಿವಿಲ್ಲದೆ ನಂಬಿಕೆಯಿಂದ ಹೊರಬಂದೆ. ಧರ್ಮದೊಂದಿಗಿನ ನನ್ನ ಸಂಬಂಧದಲ್ಲಿ ಸಿನಿಮಾ ಕ್ಷೇತ್ರ ಹಸ್ತಕ್ಷೇಪ ಮಾಡಿತು' ಎಂದು ವಾಸಿಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಚಿತ್ರರಂಗದಿಂದ ದೂರ ಸರಿದಿದ್ದರು.