ಬೆಂಗಳೂರು, ಅ.17 (Daijiworld News/TA): ‘ಸರಿಗಮಪ’ ಮೂಲಕ ಮನೆಮಾತಾದ ಗಾಯಕಿ ಸುಹಾನಾ ಸೈಯದ್, ತಮ್ಮ ಬಹುಕಾಲದ ಗೆಳೆಯ ನಿತೀನ್ ಶಿವಾಂಶ್ ಅವರನ್ನು ಮದುವೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಪರಿಚಯದಲ್ಲಿದ್ದ ಈ ಜೋಡಿ ಇದೀಗ ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಈ ಶುಭ ಸಂಗತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

16 ವರ್ಷಗಳ ಕಾಲ ಪ್ರೀತಿಸಿದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್, ಎರಡು ಮನೆಯವರನ್ನ ಒಪ್ಪಿಸಿ ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಹಾನಾ ಸಯ್ಯದ್ ಸರಿಗಮಪ ಮೂಲಕ ಮನೆ ಮಾತಾಗಿದ್ದು ಕೆಲವೊಂದು ಹಾಡಿನ ಮೂಲಕ ಮನೆಮಾತಾಗಿದ್ದರೆ, ಕೆಲವೊಂದು ಭಕ್ತಿಗೀತೆಗಳನ್ನು ಹಾಡಿ ಟೀಕೆಗೂ ಗುರಿಯಾಗಿದ್ದರು. ಇವೆಲ್ಲಾ ಟೀಕೆಗಳ ನಡುವೆಯೂ ಜನಮನದಲ್ಲಿ ಅವರ ಗಾಯನಗಳು ನೆಲೆಸಿ ಸುಹಾನಾಗೆ ಪ್ರಖ್ಯಾತಿ ನೀಡಿವೆ. ಇದೀಗ ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಗಾಯಕಿಗೆ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.
ತಮ್ಮ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ಸುಹಾನಾ, “ಪ್ರತಿ ಜೀವವೂ ಪ್ರೀತಿಗಾಗಿ ಹುಡುಕಾಡುತ್ತದೆ... ಪ್ರೀತಿಗೆ ಯಾವುದೇ ಮಿತಿಯಿಲ್ಲ... ಇಂದು ನಾವು ನಮ್ಮ ರಹಸ್ಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಾ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ” ಎಂದು ಬರೆದಿದ್ದರು. ಈ ಹೊಸ ದಾಂಪತ್ಯ ಜೀವನಕ್ಕೆ ಸುಹಾನಾ ಮತ್ತು ನಿತೀನ್ ದಂಪತಿಗೆ ಅಭಿಮಾನಿಗಳೂ ಹಾರೈಸಿದ್ದಾರೆ.