ಮೈಸೂರು, ಅ. 16 (DaijiworldNews/TA): ಬ್ಲಾಕ್ಬಸ್ಟರ್ ಹಿಟ್ ಆಗಿರುವ 'ಕಾಂತಾರ: ಚಾಪ್ಟರ್ 1' ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದ್ದು, ಎರಡನೇ ವಾರಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರಮಂದಿರಗಳಲ್ಲಿ ಕೆಲವು ಪ್ರೇಕ್ಷಕರು ದೈವದ ಅನುಕರಣೆ ಮಾಡುತ್ತಿರುವುದು ಹಾಗೂ ಅನಾವಶ್ಯಕವಾಗಿ ವರ್ತಿಸುತ್ತಿರುವುದರಿಂದ, ನಿಜವಾದ ಭಕ್ತರು ಮತ್ತು ದೈವಪರಂಪರೆಯನ್ನು ನಂಬುವವರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.

ಈ ಹಿನ್ನೆಲೆಯ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ, “ದೈವವನ್ನು ನಂಬುವವನಾಗಿ, ನಾನು ಇಂತಹ ವರ್ತನೆಗಳನ್ನು ಕಂಡಾಗ ನೋವು ಅನುಭವಿಸುತ್ತೇನೆ. ಸಿನಿಮಾ, ರಂಜನೆಯೊಂದಿಗೆ ಶ್ರದ್ಧೆಗೂ ಮೌಲ್ಯ ನೀಡುತ್ತದೆ. ದೈವದ ವಿಷಯದಲ್ಲಿ ನಾವು ಶಿಸ್ತಿನಿಂದ, ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇವೆ. ಅದನ್ನು ವ್ಯಂಗ್ಯ ಮಾಡುವ ರೀತಿಯ ಅನುಕರಣೆಯನ್ನು ಮಾಡಬೇಡಿ” ಎಂದು ಮನವಿ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದು, ಸಿನಿಮಾ ಪ್ರದರ್ಶನವನ್ನು ಸಮಯೋಚಿತವಾಗಿ, ಸಂಯಮದಿಂದ ಆನಂದಿಸಬೇಕೆಂದು ಸೂಚಿಸಿದೆ.
ಸಿನಿಮಾದ ಯಶಸ್ಸು ಕುರಿತು ಮಾತನಾಡಿದ ರಿಷಬ್ ಶೆಟ್ಟಿ, “ನಾನು ಕುಂದಾಪುರದ ಕೆರಾಡಿ ಎಂಬ ಸಣ್ಣ ಗ್ರಾಮದಿಂದ ಬಂದವನು. ಈ ಮಟ್ಟದ ಯಶಸ್ಸು ಸಾಧ್ಯವಾಗಿದೆ ಎಂಬುದು ನನಗೆ ಖುಷಿ ನೀಡುತ್ತದೆ. ಈ ಸಿನಿಮಾ ಕರ್ನಾಟಕವನ್ನು ಮೀರಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ನಮ್ಮ ಶ್ರಮಕ್ಕೆ ಬಂದ ಪ್ರತಿಫಲ” ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.