ದುಬೈ, ಅ. 09(DaijiworldNews/ TA): ಎಸ್.ವಿ.ಎಸ್ ಹಳೆವಿದ್ಯಾರ್ಥಿ ಸಂಘ ಕಟಪಾಡಿ-ದುಬೈ ಇದರಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ 55ಕ್ಕೂ ಅಧಿಕ ದಿನಗಳ ಭರ್ಜರಿ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟ ಸ್ಕೂಲ್ ಲೀಡರ್ ಕನ್ನಡ ಸಿನೆಮಾ ಅ. 26ರಂದು ದುಬೈನಲ್ಲಿ ಪ್ರದರ್ಶನಗೊಳ್ಳಲಿದೆ.

ಪ್ರತಿಷ್ಠಿತ 4 ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಸ್ಕೂಲ್ ಲೀಡರ್ ಚಿತ್ರ ಈಗಾಗಲೇ ಆಸ್ಟ್ರೇಲಿಯಾದ ಮೆಲ್ಬೋರ್ನ್,ಸಿಡ್ನಿ,ಪರ್ತ್, ಒಮಾನಿನ ಮಸ್ಕತ್ ಹಾಗೂ ಬೆಹೆರಿನ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಇದೀಗ ಎಸ್.ವಿ.ಎಸ್.ಹಳೆವಿದ್ಯಾರ್ಥಿ ಸಂಘ ಕಟಪಾಡಿ ಮತ್ತು ದುಬೈ ಇವರ ಸಹಕಾರದಿಂದ ದುಬೈ ಯ ಸ್ಟಾರ್ ಗ್ಯಾಲರಿಯ ಸಿನೆಮಾ, ಗ್ರ್ಯಾಂಡ್ ಹಾಯತ್ ನಲ್ಲಿ ಅ. 26ರಂದು ಸಂಜೆ 3.30ಕ್ಕೆ ಪ್ರದರ್ಶನ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಕೆ. ಸತ್ಯೇಂದ್ರ ಪೈ ತಿಳಿಸಿದ್ದಾರೆ.
ರಾಜ್ಯಪ್ರಶಸ್ತಿ ವಿಜೇತ ರಜಾಕ್ ಪುತ್ತೂರು ನಿರ್ದೇಶನ, ಮೋಹನ್ ಪಡ್ರೆ ಯವರ ಛಾಯಾಗ್ರಹಣ, ಸಂಗೀತ ಜಯ ಕಾರ್ತಿ, ಅಕ್ಷತ್ ವಿಟ್ಲ ಸಹನಿರ್ದೇಶನದ ಸ್ಕೂಲ್ ಲೀಡರ್ ಕನ್ನಡ ಚಲನಚಿತ್ರ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಹೊಸ ಅಧ್ಯಾಯ ಸೃಷ್ಠಿಸಿದೆ. ವಿದೇಶದಲ್ಲಿ ಚಿತ್ರ ಪ್ರದರ್ಶನ ಕಂಡ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಂಡು ವಿದೇಶದ ಕನ್ನಡಿಗರ ಮನಸೂರೆಗೊಳಿಸಿದೆ. ದುಬೈನಲ್ಲಿ ಕೂಡಾ ಸಾಕಷ್ಟು ಜನ ಈ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.
ಈ ಚಿತ್ರದಲ್ಲಿ ಕರಾವಳಿ ಚಿತ್ರರಂಗದ ದಿಗ್ಗಜರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ, ಸ್ಯಾಂಡಲ್ ವುಡ್ ಹಿರಿಯ ನಟ ರಮೇಶ್ ಭಟ್, ಮೂರುಮುತ್ತು ನಾಗೇಶ್ ಕಾಮತ್ ಕಟಪಾಡಿ,ಸುದರ್ಶನ್ ಪುತ್ತೂರು, ದೀಕ್ಷಾ ರೈ, ಶ್ರೀಜಯ್, ದೃಶ ಕೊಡಗು, ತನ್ಮಯ್ ,ಯಶಸ್ ಪಿ.ಸುವರ್ಣ ಕಟಪಾಡಿ ಸೇರಿದಂತೆ ಮಂಗಳೂರು ಮತ್ತು ಉಡುಪಿ ಜಿಲ್ಲೆಯ 25ಶಾಲೆಗಳ 120ಕ್ಕೂ ಅಧಿಕ ಮಂದಿ ಹೈಸ್ಕೂಲ್ ಮಕ್ಕಳು ನಟಿಸಿದ್ದಾರೆ. ಇದು ಸಂಪೂರ್ಣವಾಗಿ ಕಟಪಾಡಿಯ ಇತಿಹಾಸ ಪ್ರಸಿದ್ದ, 75 ಸಂವತ್ಸರ ಕಂಡ ಎಸ್ ವಿ ಎಸ್ ಶಾಲೆಯಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.