ಕ್ಯಾನ್ಬೆರಾ, ಸೆ. 08 (DaijiworldNews/AA): ಮಲ್ಲಿಗೆ ಹೂ ಮುಡಿದು ಮೆಲ್ಬೋರ್ನ್ ಏರ್ಪೋರ್ಟ್ಗೆ ತೆರೆಳಿದ ನಟಿ ನವ್ಯಾ ನಾಯರ್ಗೆ 1.14 ಲಕ್ಷ ರೂ. ದಂಡ ವಿಧಿಸಲಾಗಿದೆ.

ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಓಣಂ ಹಬ್ಬಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದರು. ಈ ವೇಳೆ ವಿಮಾನ ಹತ್ತುವ ಮುನ್ನ ಆಕೆಯ ತಂದೆ ಮಲ್ಲಿಗೆ ಹೂವನ್ನು ತಂದುಕೊಟ್ಟಿದ್ದರು ಎನ್ನಲಾಗಿದೆ.
ತಂದೆ ಕೊಟ್ಟ ಮಲ್ಲಿಗೆ ಹೂವನ್ನು ನಟಿ ಒಂದು ಬ್ಯಾಗ್ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್ ಏರ್ಪೋರ್ಟ್ನಲ್ಲಿ ಇಳಿದಿದ್ದರು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು 1.14 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ ಎಂದು ನಟಿ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ನವ್ಯಾ, "ಇದೊಂದು ಅನುಭವ. ಈ ರೀತಿಯ ಅನುಭವಗಳು ಹೊಸದನ್ನು ಕಲಿಸುತ್ತವೆ" ಎಂದು ಪೋಸ್ಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲ ಮಾಹಿತಿ ನೀಡಬೇಕು.