ಬೆಂಗಳೂರು, ಆ. 20 (DaijiworldNews/AA): ಸ್ಯಾಂಡಲ್ವುಡ್ ನಿರ್ದೇಶಕ ಪ್ರೇಮ್ಗೆ ಎಮ್ಮೆ ಮಾರುವವನೊಬ್ಬ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದು, ದೂರು ದಾಖಲಾಗಿದೆ.

ಸಿನಿಮಾ ನಿರ್ದೇಶಕ ಪ್ರೇಮ್ಗೆ ಪ್ರಾಣಿಗಳ ಮೇಲೆ ವಿಪರೀತ ಕಾಳಜಿ. ಈಗಲೂ ವ್ಯವಸಾಯದಲ್ಲಿ ಪ್ರೇಮ್ ತೊಡಗಿಕೊಂಡಿದ್ದಾರೆ. ತಮ್ಮ ಫಾರಂ ಹೌಸ್ಗಾಗಿ ಎರಡು ಎಮ್ಮೆ ಖರೀದಿಸಲು ಪ್ರೇಮ್ ಮುಂದಾಗಿದ್ದರು. ಆದರೆ ಎಮ್ಮೆ ಮಾರಾಟಗಾರನೊಬ್ಬ ಹಣ ಪಡೆದು ಪ್ರೇಮ್ಗೆ ವಂಚಿಸಿದ್ದಾನೆ ಎನ್ನಲಾಗಿದೆ.
ಗುಜರಾತ್ ಮೂಲದ ವನರಾಜ್ ಭಾಯ್ ಎಂಬುವರ ಬಳಿ ಎರಡು ಎಮ್ಮೆಗಳನ್ನು ಖರೀದಿಸಲು ಪ್ರೇಮ್ ಮುಂದಾಗಿದ್ದರು. ಎಮ್ಮೆಗಳ ಫೋಟೊ, ವಿಡಿಯೋಗಳನ್ನು ವನರಾಜ್ ಭಾಯ್ ಕಳಿಸಿದ್ದ. ಕರೆ ಮಾಡಿ ಆತನೊಂದಿಗೆ ಎಮ್ಮೆ ಖರೀದಿ ಮತ್ತು ಅದರ ಸಾಗಾಟ ಇತರೆ ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಮುಂಗಡವಾಗಿ 25,000 ರೂ. ಕೂಡ ನೀಡಿದ್ದರು. ಅದಾದ ಬಳಿಕ ಹಂತ ಹಂತವಾಗಿ 4.50 ಲಕ್ಷ ರೂ. ಹಣವನ್ನೂ ಕೊಟ್ಟಿದ್ದಾರೆ. ಆದರೀಗ ಎಮ್ಮೆ ಕೊಡದೆ ಆ ವ್ಯಕ್ತಿ ಪರಾರಿಯಾಗಿದ್ದಾನೆ.
ವನರಾಜ್ ಭಾಯ್ ನೀಡಿದ್ದ ವಿಳಾಸಕ್ಕೆ ಜನರನ್ನು ಕಳಿಸಿ ಪರಿಶೀಲಿಸಿದರೆ ಅದು ನಕಲಿ ವಿಳಾಸ ಎಂಬುದು ತಿಳಿದು ಬಂದಿದೆ. ಮಾತ್ರವಲ್ಲದೆ ಆತ ಫೋನ್ ಸ್ವಿಚ್ ಮಾಡಿದ್ದು ಸಂಪರ್ಕಕ್ಕೆ ಸಿಗದಂತಾಗಿದ್ದಾನೆ. ಇದೀಗ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಒಬ್ಬರಿಂದ ಪೊಲೀಸ್ ಠಾಣೆಗೆ ವನರಾಜ್ ಭಾಯ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರೇಮ್ ಅವರ ಮ್ಯಾನೇಜರ್ ಮತ್ತು ನಟರೂ ಆಗಿರುವ ದಶಾವರ ಚಂದ್ರು ಅವರ ಮೂಲಕ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರೇಮ್, ವನರಾಜ್ ಭಾಯ್ಗೆ ಆನ್ಲೈನ್ ಮೂಲಕ ಹಣ ಕಳಿಸಿರುವ ಮಾಹಿತಿ, ವನರಾಜ್ ಭಾಯ್ನ ಮೊಬೈಲ್ ಸಂಖ್ಯೆ, ಆತ ನೀಡಿದ್ದ ವಿಳಾಸ, ಎಮ್ಮೆಯ ಫೋಟೊ, ವಿಡಿಯೋ ಸೇರಿದಂತೆ ಕೆಲ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ.