ಮುಂಬೈ, ಆ. 05 (DaijiworldNews/TA): ದೀಪಿಕಾ ಪಡುಕೋಣೆ ಅತ್ಯಂತ ಜನಪ್ರಿಯ ಜಾಗತಿಕ ಐಕಾನ್ಗಳಲ್ಲಿ ಒಬ್ಬರು. ಎರಡು ದಶಕಗಳಿಗೂ ಹೆಚ್ಚಿನ ಕಾಲದ ವೃತ್ತಿಜೀವನದಲ್ಲಿ ಈ ನಟಿ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪ್ರಸ್ತುತ ತಮ್ಮ ತಾಯ್ತನದ ಕರ್ತವ್ಯಗಳಲ್ಲಿ ನಿರತರಾಗಿದ್ದರೂ, ನಟಿ ತಮ್ಮ ಕೆಲವೊಮ್ಮೆ ಮುದ್ದಾದ ಮತ್ತು ಕೆಲವೊಮ್ಮೆ ವಿಚಿತ್ರ ಕಥೆಗಳು ಮತ್ತು ರೀಲ್ಗಳೊಂದಿಗೆ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ದೀಪಿಕಾ ಪಡುಕೋಣೆ ಅವರು 80 ಮಿಲಿಯನ್ ಸಾಮಾಜಿಕ ಮಾಧ್ಯಮ ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಈಗ ಅವರು ಡಿಜಿಟಲ್ ಜಾಗದಲ್ಲಿ ಹೊಸ ಮೈಲಿಗಲ್ಲನ್ನು ಮುಟ್ಟಿದ್ದಾರೆ.

ಹಿಲ್ಟನ್ ಹೋಟೆಲಿನ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ‘ಹಿಲ್ಟನ್’ನ ಜಾಹೀರಾತಿನ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೂನ್ 9 ರಂದು ಜಾಹೀರಾತನ್ನು ದೀಪಿಕಾ ಪಡುಕೋಣೆ ಶೇರ್ ಮಾಡಿದ್ದರು. ಆ ವಿಡಿಯೋ ಇದೀಗ 1.9 ಬಿಲಿಯನ್ ವೀವ್ಸ್ ಕಂಡಿದೆ. ವರದಿಯ ಪ್ರಕಾರ ಇದು ಇದೀಗ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರೀಲ್ಗಳಲ್ಲಿ ಒಂದಾಗಿದೆ. ಪೋಸ್ಟ್ ಮಾಡಿದ ಕೇವಲ 8 ವಾರಗಳಲ್ಲಿ ಈ ಸಾಧನೆಗಾಗಿ ಅಭಿಮಾನಿಗಳು ದೀಪಿಕಾ ಪಡುಕೋಣೆಯನ್ನು ಶ್ಲಾಘಿಸುತ್ತಿದ್ದಾರೆ.
ತಾಯ್ತನಕ್ಕಾಗಿ ಕೆಲ ಸಮಯ ಚಿತ್ರರಂಗದಿಂದ ಬಿಡುವು ಪಡೆದಿದ್ದ ಈ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಅಟ್ಲಿ ನಿರ್ದೇಶಿಸಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾನಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.