ಬೆಂಗಳೂರು,ಜು. 13 (DaijiworldNews/TA): ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿಯವರ ಸಂಭಾವನೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಕಾಂತಾರ ಬಳಿಕ ಅವರ ಸಂಭಾವನೆ ಎಷ್ಟಿರಬಹುದು, ಕಾಂತಾರ ಪ್ರೀಕ್ವೆಲ್ಗೆ ಅದೆಷ್ಟು ಚಾರ್ಜ್ ಮಾಡಿರಬಹುದು ಎಂಬ ಬಗ್ಗೆ ಸಹಜವಾಗಿಯೇ ಚರ್ಚೆ ನಡೆಯುತ್ತಿತ್ತು. ಅದಕ್ಕೆ ಉತ್ತರವಾಗಿ ಇದೀಗ ಒಂದು ನಂಬರ್ ಸಿಕ್ಕಿದೆ. ಅದೇ 'ಕಾಂತಾರ 1' ರಿಷಬ್ ಶೆಟ್ಟಿ ಸಂಭಾವನೆ ಎನ್ನಲಾಗುತ್ತಿದೆ.

ಈ ಪ್ರೀಕ್ವೆಲ್ಗೆ ರಿಷಬ್ ಶೆಟ್ಟಿ ತುಂಬಾ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ. ಕಾಂತಾರ ಸಿನಿಮಾದ 2400 ಪಟ್ಟು ಹೆಚ್ಚು (2400%) ಸಂಭಾವನೆ ಕಾಂತಾರ ಪ್ರೀಕ್ವೆಲ್ಗೆ ಅವರಿಗೆ ಸಿಕ್ಕಿದೆ ಎಂಬ ಮಾಹಿತಿ ಇದೆ. ಅದರ ಪ್ರಕಾರ, ಮುಂಬರುವ ಕಾಂತಾರ ಭಾಗ-1 ಸಿನಿಮಾಗೆ ಅವರಿಗೆ 4 ಕೋಟಿಗಿಂತಲೂ ಹೆಚ್ಚಿನ ಸಂಭಾವನೆ ದೊರಕಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ರಿಷಬ್ ಶೆಟ್ಟಿಯವರಾಗಲೀ , ಕೊಟ್ಟಿರುವ ನಿರ್ಮಾಣ ಸಂಸ್ಥೆಯಾಗಲೀ ಕನ್ಫರ್ಮ್ ಮಾಡಿಲ್ಲ.
ಕಾಂತಾರ ಪ್ರೀಕ್ವೆಲ್ ಬಗ್ಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತ ಹಾಗೂ ಪ್ರಪಂಚದ ಹಲವು ಕಡೆಗಳಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಕಾರಣ, ಈ ಮೊದಲು ತೆರೆಗೆ ಬಂದಿದ್ದ ಕಾಂತಾರ ಸಿನಿಮಾ ಹುಟ್ಟಿಸಿರುವ ಭರವಸೆ ಹಾಗೂ ಕ್ರೇಜ್. ಸದ್ಯ ಶೂಟಿಂಗ್ ಹಂತದಲ್ಲಿರುವ ಕಾಂತಾರ ಪ್ರೀಕ್ವೆಲ್ಗೆ ಕೆಲವು ಅಡೆತಡೆಗಳು ಬಂದಾಗ, ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರ್ ಹಾಗೂ ಚಿತ್ರತಂಡ ಅದನ್ನು ಧೈರ್ಯವಾಗಿ ಎದುರಿಸಿದರೂ 'ಕಾಂತಾರ' ಪ್ರಿಯರು ಬಹಳಷ್ಟು ಅತಂಕಕ್ಕೆ ಒಳಗಾಗಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ಅಂದುಕೊಂಡ ಸಮಯಕ್ಕೇ ಮುಗಿದಿದ್ದು, ಈ ಮೊದಲು ಹೇಳಿದಂತೆ ಬಿಡುಗಡೆ ಕೂಡ ಫಿಕ್ಸ್ ಆಗಿದೆ ಎಂದು ಹೇಳಲಾಗಿದೆ.