ಪುತ್ತೂರು, ಜೂ. 20 (DaijiworldNews/AA): ಯುವ ಗಾಯಕಿ ಅಖಿಲಾ ಪಜಿಮಣ್ಣು ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರು ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಖಿಲಾ ಪಜಿಮಣ್ಣು ಮೂರು ವರ್ಷಗಳ ಹಿಂದೆ ಬೆಳಗಾವಿ ಮೂಲದ ಅಮೆರಿಕ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ ಧನಂಜಯ್ ಶರ್ಮಾ ಅವರೊಂದಿಗೆ ವಿವಾಹವಾಗಿದ್ದರು. ಆದರೆ ಈಗ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.
ದಿಢೀರನೇ ಅಖಿಲಾ ಹಾಗೂ ಧನಂಜಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಅವರಿಬ್ಬರು ಪುತ್ತೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮಾ ನಡುವೆ ಮಧ್ಯಸ್ಥಿಕೆಗೆ ಕಳೆದ ಆರು ತಿಂಗಳಿಂದ ಕೋರ್ಟ್ ಅವಕಾಶ ನೀಡಿತ್ತು. ಜೂನ್ 18ರಂದು ಅಖಿಲಾ ಹಾಗೂ ಧನಂಜಯ್ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮ್ಯೂಚುಯಲ್ ಡಿವೋರ್ಸ್ ಪಡೆಯಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಧನಂಜಯ್ ಶರ್ಮ ಅವರು ಪುತ್ತೂರಿನ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಿ ವಾಪಸ್ ತೆರಳಿದ್ದಾರೆ. ಸದ್ಯದಲ್ಲೇ ಅವರು ಅಮೆರಿಕಕ್ಕೆ ವಾಪಾಸ್ಸಾಗಲಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಈ ದಂಪತಿಯ ವಿಚ್ಛೇದನ ಅರ್ಜಿಯ ವಿಚಾರಣೆ ಮುಗಿದಿದೆ. ನ್ಯಾಯಾಲಯವು ಜೂನ್ 19ಕ್ಕೆ ತೀರ್ಪು ಕಾಯ್ದಿರಿಸಿದೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಅವರ ವಿಚ್ಛೇದನಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈಗಾಗಲೇ ಅಖಿಲಾ ಅವರು ತಮ್ಮ ಸಾಮಾಜಿಕ ಜಾಲತಾಣದಿಂದ ಪತಿಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.