ಬೆಂಗಳೂರು, ಜೂ. 19 (DaijiworldNews/AA): ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯುವ ರಾಜ್ಕುಮಾರ್ ಈಗ ಕ್ಷಮೆಯಾಚಿಸಿದ್ದಾರೆ.

ಮಹಿಳೆ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂಬ ಆರೋಪ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಹಿಳೆಯ ಕಾಲ ಮೇಲೆ ಕಾರು ಹತ್ತಿದ್ದ ವಿಚಾರ ಗೊತ್ತಿರಲಿಲ್ಲ. ಬೆಂಗಳೂರಿಗೆ ವಾಪಸ್ ಆದ ಬಳಿಕ ಮಾಧ್ಯಮದಲ್ಲಿ ನೋಡಿದೆ. ಬಳಿಕ ನಮ್ಮ ಅಭಿಮಾನಿಗಳ ಕಡೆಯಿಂದ ಗಾಯಗೊಂಡ ಮಹಿಳೆಗೆ ಎಲ್ಲಾ ಸೌಕರ್ಯ ಮಾಡಿಕೊಡಲಾಯ್ತು. ಬೌನ್ಸರ್ ತಳ್ಳಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈ ವಿಚಾರವಾಗಿ ನಾನು ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ.
ಯುವ ರಾಜ್ಕುಮಾರ್ ಅಭಿನಯದ ಎರಡನೇ ಚಿತ್ರ 'ಎಕ್ಕ' ಸಿನಿಮಾ ಟೀಮ್ ಪ್ರಚಾರಕ್ಕೆಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿತ್ತು. ತುಮಕೂರಿನಲ್ಲಿ ಸಿನಿಮಾ ಪ್ರಚಾರದ ವೇಳೆ ಸಿದ್ದಗಂಗಾ ಮಠಕ್ಕೆ ನಟ ಯುವ ರಾಜ್ಕುಮಾರ್ ಹಾಗೂ ಇತರರು ಭೇಟಿ ನೀಡಿದ್ದರು. ಯುವರಾಜ್ಕುಮಾರ್ ಬಂದಿದ್ದ ಕಾರಣಕ್ಕೆ ಆ ಸ್ಥಳದಲ್ಲಿ ಭಾರೀ ಜನಸಂದಣಿ ಏರ್ಪಟ್ಟಿತ್ತು. ಆಗ ನಡೆದ ತಳ್ಳಾಟ ನೂಕಾಟದಲ್ಲಿ ಯುವ ರಾಜ್ಕುಮಾರ್ ಕುಳಿತಿದ್ದ ಕಾರು ಮಹಿಳೆಯ ಕಾಲ ಮೇಲೆ ಹರಿದಿತ್ತು. ಘಟನೆಯಿಂದ ಮಹಿಳೆಯ ಕಾಲಿಗೆ ಪೆಟ್ಟಾಗಿತ್ತು.