ಮುಂಬೈ, ಜೂ. 10 (DaijiworldNews/AA): ನಟಿ ದೀಪಿಕಾ ಪಡುಕೋಣೆ ಅವರು ನಟನೆಯ ಜೊತೆಗೆ ಬ್ಯಾಡ್ಮಿಂಟನ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ತಂದೆ ಪ್ರಕಾಶ್ ಪಡುಕೋಣೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ. ಇಂದು ಪ್ರಕಾಶ್ ಪಡುಕೋಣೆ ಬರ್ತ್ಡೇ ಹಿನ್ನಲೆ ದೀಪಿಕಾ ಪಡುಕೋಣೆ ಅವರು ಹೊಸ ಬ್ಯಾಡ್ಮಿಂಟನ್ ಸ್ಕೂಲ್ ಆರಂಭಿಸಿದ್ದಾರೆ. ಈ ಮೂಲಕ ತಂದೆಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

ದೀಪಿಕಾ ಅವರು 'ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್' ಹೊಸ ಕೇಂದ್ರವನ್ನು ಮಂಗಳವಾರ ಆರಂಭಿಸಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. 'ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳು ನಾನು. ಈ ಕ್ರೀಡೆ ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದು ನನಗೆ ಗೊತ್ತು. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಮೂಲಕ ನಾವು ಬ್ಯಾಡ್ಮಿಂಟನ್ ಆಟದ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಜನರಿಗೆ ತಲುಪಿಸಲು ಬಯಸಿದ್ದೇವೆ' ಎಂದು ಪೋಸ್ಟ್ ಮಾಡಿದ್ದಾರೆ.
'ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹ ಎಷ್ಟು ಎಂಬುದು ನಿಮ್ಮನ್ನು ಚೆನ್ನಾಗಿ ಬಲ್ಲವರಿಗೆ ಗೊತ್ತು. 70 ವರ್ಷ ವಯಸ್ಸಿನಲ್ಲೂ ಬ್ಯಾಡ್ಮಿಂಟನ್ನ ಉಸಿರಾಡುತ್ತಿದ್ದೀರಿ. ನಿಮ್ಮ ಉತ್ಸಾಹವನ್ನು ನನಸಾಗಿಸಲು ನಾವು ಬದ್ಧರಾಗಿದ್ದೇವೆ' ಎಂದು ದೀಪಿಕಾ ಬರ್ತ್ಡೇ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
'ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್' ಬೆಂಗಳೂರು, ಮೈಸೂರು, ಮುಂಬೈ, ಚೆನ್ನೈ ಸೇರಿದಂತೆ ದೇಶದ 18 ನಗರಗಳಲ್ಲಿ ಒಟ್ಟೂ 75 ಕೇಂದ್ರಗಳನ್ನು ಹೊಂದಿದೆ. ಈ ವರ್ಷದ ಕೊನೆಯಲ್ಲಿ 100 ಕೇಂದ್ರ ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಒಟ್ಟೂ 250 ಕೇಂದ್ರವನ್ನು ಆರಂಭಿಸುವ ಉದ್ದೇಶ ದೀಪಿಕಾ ಅವರಿಗಿದೆ.