ಚೆನ್ನೈ, ಏ.30(DaijiworldNews/TA): ನಟ ಅಜಿತ್ ಕುಮಾರ್ ಕಾಲಿಗೆ ಗಾಯವಾಗಿ ಬುಧವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನಟನನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ರಂಪಾಟದ ಕಾರಣದಿಂದಾಗಿ ನಟನಿಗೆ ಕಾಲಿಗೆ ಸಣ್ಣ ಗಾಯವಾಗಿದೆ ಎಂದು ಹೇಳಲಾಗಿದೆ.

ತಮಿಳು ನಟ ಅಜಿತ್ ಕುಮಾರ್ ಅವರನ್ನು ಏಪ್ರಿಲ್ 28 ರಂದು ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಪುರಸ್ಕರಿಸಲಾಗಿದೆ. ಆದಾಗ್ಯೂ, ಒಂದು ದುರದೃಷ್ಟಕರ ಘಟನೆ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ. ವರದಿಯ ಪ್ರಕಾರ, ಚೆನ್ನೈ ವಿಮಾನ ನಿಲ್ದಾಣದಲ್ಲಿ, ಗುಡ್ ಬ್ಯಾಡ್ ಅಗ್ಲಿ ತಾರೆಯೊಂದಿಗೆ ಫೋಟೋ ಕ್ಲಿಕ್ಕಿಸಲು ಭಾರಿ ಜನಸಮೂಹ ಧಾವಿಸಿತು, ಇದರಿಂದಾಗಿ ಅವರ ಕಾಲಿಗೆ ಗಾಯವಾಯಿತು. ವರದಿಗಳ ಪ್ರಕಾರ, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಣ್ಣ ಪ್ರಮಾಣದ ಗಾಯವಾಗಿದ್ದು, ಶೀಘ್ರದಲ್ಲಿಯೇ ಅಜಿತ್ ಡಿಸ್ಚಾರ್ಜ್ ಆಗಲಿದ್ದಾರೆ. ಸದ್ಯ ಈ ವಿಚಾರ ತಿಳಿದು ನೆಚ್ಚಿನ ನಟ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ಅಜಿತ್ ಕುಮಾರ್ ನಟಿಸಿದ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರ ಸಕ್ಸಸ್ ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಕೋಟಿಗಟ್ಟಲೇ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.