ಮುಂಬೈ, ಏ.24 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ದಾಳಿಗೆ ಪಾಕಿಸ್ತಾನ ತೆರೆಮರೆಯಲ್ಲಿ ಕುಮ್ಮಕ್ಕು ನೀಡಿರುವುದು ಖಚಿತವಾಗಿರುವುದರಿಂದ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ತಿರುಗೇಟು ನೀಡಿದೆ. ಇದೀಗ ಭಾರತದಲ್ಲಿ ಬಿಡುಗಡೆಯಾಗಬೇಕಿದ್ದ ಪಾಕಿಸ್ತಾನದ ನಟನ ಸಿನಿಮಾ ಒಂದಕ್ಕೆ ಅವಕಾಶ ನಿರಾಕರಿಸಲಾಗಿದೆ.

ಈ ಹಿಂದೆ ಬಾಲಿವಡ್ನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಪಾಕ್ ನಟ ಫಹಾದ್ ಖಾನ್ ನಟನೆಯ ಹಿಂದಿ ಸಿನಿಮಾ 'ಅಬಿರ್ ಗುಲಾಲ್' ಮೇ 9ರಂದು ಬಿಡುಗಡೆಯಾಗಬೇಕಿತ್ತು. ಈ ಸಿನಿಮಾನಲ್ಲಿ ವಾಣಿ ಕಪೂರ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಆದರೆ ಇದೀಗ ಈ ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಅವಕಾಶವನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ.
ಫಹಾದ್ ಖಾನ್ ಈ ಹಿಂದೆ ಇವರು ರಣ್ಬೀರ್ ಕಪೂರ್, ಅನುಷ್ಕಾ ಶರ್ಮಾ ನಟನೆಯ 'ಏ ದಿಲ್ ಹೇ ಮುಷ್ಕಿಲ್', ಸೋನಂ ಕಪೂರ್ ನಟನೆಯ 'ಖೂಬ್ಸೂರತ್', ಕರೀನಾ ನಟನೆಯ 'ಕಪೂರ್ ಆಂಡ್ ಸನ್ಸ್' ಇನ್ನೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದರು. 2016ರ ಬಳಿಕ ಪಾಕಿಸ್ತಾನದ ನಟರು ಭಾರತದ ಸಿನಿಮಾಗಳಲ್ಲಿ ನಟಿಸದಂತೆ ನಿಷೇಧ ಹೇರಲಾಗಿತ್ತು. ಆದರೆ ಇತ್ತೀಚೆಗೆ ಈ ತೆರವಿಗೆ ತಡೆ ಸಿಕ್ಕಿತ್ತು. ಈ ಹಿನ್ನೆಲೆ ಫಹಾದ್ ಖಾನ್ 'ಅಬಿರ್ ಗುಲಾಲ್' ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಇದೀಗ ಈ ಸಿನಿಮಾಗೆ ಸಂಕಷ್ಟ ಎದುರಾಗಿದೆ.
ಫಹಾದ್ ಖಾನ್ ಹೊರತಾಗಿ 'ಅಬಿರ್ ಗುಲಾಲ್' ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ. ಈ ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶಿಸಿದ್ದಾರೆ.