ಬೆಂಗಳೂರು, ಏ.23DaijiworldNews/AK):ಕನ್ನಡ ಸಿನಿಮಾ ನಟಿ ಅರ್ಚನಾ ಕೊಟ್ಟಿಗೆ ವಿವಾಹವು ಕರ್ನಾಟಕದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಬಿಆರ್ ಶರತ್ ಜೊತೆ ನಡೆಯಿತು.

ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್, ಜಿಟಿ ಆಟಗಾರ ಪ್ರಸೀದ್ ಕೃಷ್ಣ ಸೇರಿದಂತೆ ಅನೇಕ ಕ್ರಿಕೆಟಿಗರು, ಚಿತ್ರರಂಗದವರು ಈ ಸಂದರ್ಭದಲ್ಲಿ ಹಾಜರಿ ಹಾಕಿದ್ದರು.
ಅರ್ಚನಾ ಕೊಟ್ಟಿಗೆ ಹಾಗೂ ಬಿಆರ್ ಶರತ್ ಅವರು ಈ ಮೊದಲು ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅರ್ಚನಾ ಹಾಗೂ ಶರತ್ ವಿವಾಹದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಅರ್ಚನಾ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2018ರ ‘ಅರಣ್ಯಕಾಂಡ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಬಂದರು. ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ಡಿಯರ್ ಸತ್ಯ’, ‘ತ್ರಿಬಲ್ ರೈಡಿಂಗ್’ ರೀತಿಯ ಸಿನಿಮಾಗಳಲ್ಲಿ ಅವರು ನಟಿಸಿದರು. ಈ ವರ್ಷ ರಿಲೀಸ್ ಆದ ‘ಫಾರೆಸ್ಟ್’ ಹೆಸರಿನ ಕನ್ನಡ ಸಿನಿಮಾದಲ್ಲಿ ಅರ್ಚನಾ ನಟಿಸಿದ್ದರು.